ದಲ
ಸೂರ್ಯವಂಶದ ಪರೀಕ್ಷಿದ್ರಾಜನಿಂದ ಮಂಡೂಕ ಕನ್ಯೆ ಸುಶೋಭನೆ ಎಂಬಾಕೆಯಲ್ಲಿ ಹುಟ್ಟಿದ ಮೂವರಲ್ಲಿ ಮಧ್ಯದವ. ಈತನ ಅಣ್ಣ ಶಲ ಒಮ್ಮೆ ಬೇಟೆಗೆ ಹೋಗಿದ್ದಾಗ ಆತನ ಕುದುರೆಗಳು ಬಳಲಿದ ಕಾರಣ, ಸಮೀಪದಲ್ಲಿ ತಪಸ್ಸು ಮಾಡುತ್ತಿದ್ದ ವಾಮದೇವ ಎಂಬ ಋಷಿಯ ಬಳಿಗೆ ಹೋಗಿ ದಿವ್ಯಾಶ್ವಗಳನ್ನು ಬೇಡಿ, ಪಡೆದು, ಬೇಟೆ ಮುಗಿದೊಡನೆಯೇ ಹಿಂತಿರುಗಿಸುವುದಾಗಿ ಹೇಳಿ ಬಂದ. ಆದರೆ ಬೇಟೆ ಮುಗಿದ ತರುವಾಯ ಕುದುರೆಗಳನ್ನು ಹಿಂತಿರುಗಿಸಲು ಮನಸ್ಸು ಒಡಂಬಡದೆ ಕೇಳಲು ಬಂದ ಋಷಿಯನ್ನು ಶಿಕ್ಷಿಸಲು ಮುಂದಾಗಿ ಋಷಿಯಿಂದ ನಿರ್ಮಿತವಾದ ರಾಕ್ಷಸನಿಂದ ಹತನಾದ. ಅನಂತರ ಪಟ್ಟಕ್ಕೆ ಬಂದ ದಲನೂ ಕುದುರೆಗಳನ್ನು ಹಿಂತಿರುಗಿಸಲು ಸಮ್ಮತಿಸಲಿಲ್ಲ. ಪ್ರತಿಯಾಗಿ ಋಷಿಯನ್ನೇ ಕೊಲ್ಲಲು ಕೈ ಎತ್ತಿದ. ಆದರೆ ಎತ್ತಿದ್ದ ಕೈ ಎತ್ತಿದ್ದ ಹಾಗೆ ಕಟ್ಟಿ ಹೋಯಿತು. ದಲನ ಮಕ್ಕಳೆಲ್ಲರೂ ಸತ್ತರು. ಆಗ ಪ್ರಜೆಗಳು ಬುದ್ಧಿ ಹೇಳಿ ಋಷಿಗೆ ಕುದುರೆಗಳನ್ನು ಕೊಡಿಸಿ ದಲನನ್ನು ಕಾಪಾಡಿದರು. ಈ ವೃತ್ತಾಂತ ಮಹಾಭಾರತದ ಅರಣ್ಯಪರ್ವದಲ್ಲಿ ಬಂದಿದೆ.							(ಎಸ್.ಆರ್.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ